ವಿಶ್ವದಾದ್ಯಂತ ಮಧ್ವತತ್ವದ ವ್ಯಾಪಕ ಪ್ರಚಾರವನ್ನು ಮಾಡುತ್ತಿರುವ ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ತಮ್ಮ ಐತಿಹಾಸಿಕ ಚತುರ್ಥ ಶ್ರೀಕೃಷ್ಣ ಪೂಜಾಪರ್ಯಾಯದ ಮೊದಲ ಮುಹೂರ್ತವಾದ ಬಾಳೇ ಮುಹೂರ್ತವನ್ನು ಅಪಾರ ಶಿಷ್ಯರೊಂದಿಗೆ ಅತ್ಯಂತ ವೈಭವದಿಂದ ನಡೆಸಿದರು. ಬೆಳಿಗ್ಗೆ ಪಟ್ಟದ ದೇವರಾದ ಮಧ್ವಕರಾರ್ಚಿತ ಶ್ರೀಪಾಂಡುರಂಗವಿಠಲ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನು ನಡೆಸಿ ಚಂದ್ರಮೌಳೇಶ್ವರ ದೇವರ ಸನ್ನಿಧಿ, ಶ್ರೀ ಅನಂತೇಶ್ವರ ದೇವರ ಸನ್ನಿಧಿ, ಶ್ರೀಕೃಷ್ಣ ದೇವರ ಮುಖ್ಯಪ್ರಾಣದೇವರ ಆಚಾರ್ಯ ಮಧ್ವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನು ನಡೆಸಿ ರಥಬೀದಿಯ ಮಠದ ಹಿಂಭಾಗದಲ್ಲಿ ಸಿದ್ಧಪಡಿಸಿದ್ದ ಸ್ಥಳದಲ್ಲಿ ಬಾಳೇ ಗಿಡ ಹಾಗೂ ತುಳಸಿಯ ಸಸಿಗಳನ್ನು ಪರಮಪೂಜ್ಯ ಶ್ರೀಪಾದರು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ತಮ್ಮ ಚತುರ್ಥ ಪರ್ಯಾಯದ ಯೋಜನೆಗಳನ್ನು ವಿವರಿಸಿದ ಪರಮಪೂಜ್ಯ ಶ್ರೀಪಾದರು ಆಗಮಿಸಿದ ಗಣ್ಯರಿಗೆ ಬಾಳೇ ಸಸಿಗಳನ್ನು ನೀಡಿ ಅನುಗ್ರಹಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮಠದ ದೇಶ ವಿದೇಶಗಳ ಅಪಾರ ಶಿಷ್ಯರು ಭಾಗವಹಿಸಿದ್ದರು. ಕಾರ್ಯಕ್ರಮವು ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು.