|| श्रीवीरविठ्ठलो विजयतेतराम् ||

ಶ್ರೀ ಸುಜ್ಞಾನೇಂದ್ರತೀರ್ಥ ಶ್ರೀಪಾದರು | Shri Sujnanendra tirtha Swamiji

Home / images/ ಶ್ರೀ ಸುಜ್ಞಾನೇಂದ್ರತೀರ್ಥ ಶ್ರೀಪಾದರು | Shri Sujnanendra tirtha Swamiji

ಶ್ರೀ ಸುಜ್ಞಾನೇಂದ್ರತೀರ್ಥ ಗುರುಭ್ಯೋ ನಮಃ

ಉಡುಪಿಯ ಅಷ್ಟಮಠಗಳಲ್ಲೊಂದಾದ ಶ್ರೀಪುತ್ತಿಗೆ ಮಠ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ಉಪೇಂದ್ರತೀರ್ಥರ ಪರಂಪರೆ. ಈ ಗುರುಪರಂಪರೆಯ 29ನೆಯ ಯತಿಗಳಾಗಿ ಪೀಠವನ್ನು ಬೆಳಗಿದವರು ಪರಮಪೂಜ್ಯ ಶ್ರೀ ಶ್ರೀ ಸುಜ್ಞಾನೇಂದ್ರತೀರ್ಥ ಶ್ರೀಪಾದರು.

ಶ್ರೀಪಾದರು ಶತಾಯುಷಿಗಳಾದ ಮಹಾತಪಸ್ವಿಗಳಾದ ಶ್ರೀ ಶ್ರೀ ಸುಧೀಂದ್ರತೀರ್ಥ ಶ್ರೀಪಾದರಿಂದ 1918ರಲ್ಲಿ ಸಂನ್ಯಾಸಾಶ್ರಮವನ್ನು ಪಡೆದವರು. ಶ್ರೀಪಾದರ ಪೂರ್ವಾಶ್ರಮ ನಾಮ ಹೆಜಮಾಡಿ ಗೋಪಾಲ ಭಟ್ಟ. ಪೂಜ್ಯರು ಭಾರದ್ವಾಜಗೋತ್ರದ ಯಜುರ್ವೇದಿ ಬೋಧಾಯನ ಶಾಖೆಯವರು.

ಶ್ರೀಪಾದರು ಅದಮಾರು ಮಠದ ಪ್ರಭಾವಿ ಯತಿಗಳಾಗಿದ್ದ ಶ್ರೀ ಶ್ರೀ ವಿಬುಧಪ್ರಿಯತೀರ್ಥರಲ್ಲಿ ನ್ಯಾಯಸುಧಾಂತ ವೇದಾಂತ ಅಧ್ಯಯನವನ್ನು ನಡೆಸಿದವರು.

1960-62ರ ಪುತ್ತಿಗೆಮಠದ ಶ್ರೀಉಪೇಂದ್ರವಿಠ್ಠಲನ ಶ್ರೀಕೃಷ್ಣಪೂಜಾ ಪರ್ಯಾಯವನ್ನು ಚೀನಾ ಯುದ್ಧದ ಸಂಕಷ್ಟದ ಪರಿಸ್ಥಿಯಲ್ಲೂ ಅತ್ಯಂತ ಯಶಸ್ವಿಯಾಗಿ ನಡೆಸಿದವರು.

ಶ್ರೀಮಠದ ಅನೇಕ ಶಾಖೆಗಳನ್ನು ಜೀರ್ಣೋದ್ಧಾರಗೊಳಿಸಿದ ಹಿರಿಮೆ ಸುಜ್ಞಾನೇಂದ್ರತೀರ್ಥ ಶ್ರೀಪಾದರದ್ದು. ಶ್ರೀಗಳು ಸ್ವತಃ ಆಯುರ್ವೇದ ವೈದ್ಯದಲ್ಲಿ ಸಿದ್ಧಹಸ್ತರಾಗಿದ್ದು ಶ್ರೀಮಠದ ಪಾಡಿಗಾರು ಶಾಖೆಯಲ್ಲಿ ಅನೇಕ ಔಷಧೀಯ ಸಸ್ಯಗಳನ್ನು ಬೆಳೆಸಿ ಉಳಿಸಿದ್ದರು.

ಆನೆಕಾಲು ರೋಗವೇ ಮೊದಲಾದ ಅಪರೂಪದ ರೋಗಗಳಿಗೆ ಅನೇಕ ಭಕ್ತರು, ಆಸ್ತಿಕರು ಶ್ರೀಪಾದರಿಂದ ಔಷಧಿಯನ್ನು ಪಡೆದು ಆರೋಗ್ಯವಂತರಾಗಿದ್ದರು.

ಇವರ ಆಯುವೇದಪಾಂಡಿತ್ಯಕ್ಕೆ ಅಂದಿನ ಹೈದರಾಬಾದ್ ವಿಶ್ವವಿದ್ಯಾಲಯವು ‘ಶ್ರೀ ವಿದ್ಯಾವಲ್ಲಭ’ ಎಂಬ ಬಿರುದನ್ನಿತ್ತು ಗೌರವಿಸಿತ್ತು.

ಸ್ವತಃ ಪ್ರಗಲ್ಭಪಂಡಿತರಾಗಿದ್ದ ಶ್ರೀಪಾದರು ಮೂರ್ತಿಪೂಜೆಯ ಮಹತ್ವ ಹಾಗೂ ಪರ್ಯಾಯೋತ್ಸವ ಅಷ್ಟಮಠದ ಪರಂಪರೆಯ ಕುರಿತಾದ ಲೇಖನಗಳನೇಕವನ್ನು ಬರೆದಿದ್ದರು.

ಕೃಷ್ಣಾಪುರಮಠದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಹಾಗೂ ಪುತ್ತಿಗೆಮಠದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಸಂನ್ಯಾಸಾಶ್ರಮವನ್ನು ನೀಡಿ ಪರಂಪರೆಯ ಮುಂದುವರಿಕೆಗೆ ಕಾರಣರಾದರು.

ಶ್ರೀಪಾದರು 1974ರ ‘ಆನಂದ’ನಾಮ ಸಂವತ್ಸರದ ಆಷಾಢ-ಕೃಷ್ಣ-ಏಕಾದಶಿಯಂದು ವೃಂದಾವನಸ್ಥರಾದರು.

ಶ್ರೀಪಾದರ ವೃಂದಾವನವು ಉಡುಪಿಯ ಶ್ರೀಕೃಷ್ಣನ ಸನ್ನಿಧಿಯ ಅಷ್ಟಮಠಾಧೀಶರ ವೃಂದಾವನ ಸಮುಚ್ಚಯದಲ್ಲಿದೆ.

ಇಂತಹ ಶ್ರೇಷ್ಠ ಗುರುಪರಂಪರೆಗೆ ನಮ್ಮ ಭಕ್ತಿಪೂರ್ವಕ ನಮನಗಳು.

The main branch of this Matha is in the village by name Puthige. The idol of Vithal with Rukmini and Satyabhama gifted to the first pontiff Shri Upendra Tirtha by the Acharya Madhva is worshipped here. 

Quick Links

Copyright 2023 © All Right Reserved Design by Shri Puthige Matha